ಸಹಕಾರ ಸಂಘದ ಯೋಜನೆಗಳು

ಸಹಕಾರಿ ನೂಲಿನ ಗಿರಣಿಗಳ / ಸಹಕಾರಿ ಸಂಘಗಳ ವಿಭಾಗ

ರಾಜ್ಯದಲ್ಲಿ ಒಟ್ಟು 905 ಕೈಮಗ್ಗ /ವಿದ್ಯುತ್ಮಗ್ಗ ನೇಕಾರರ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿವೆ ಮತ್ತು 11 ಸಹಕಾರಿ ನೂಲಿನ ಗಿರಣಿಗಳು ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದಲ್ಲಿನ ನೇಕಾರರ ಆರ್ಥಿಕ, ಸಾಮಾಜಿಕ ಅಭಿವೃದ್ಧಿಗಾಗಿ ಕಂಕಣಿಬದ್ಧವಾಗಿ ದುಡಿಯುತ್ತಿವೆ. ಈ ಸಹಕಾರಿ ಸಂಘಗಳು, ನೇಕಾರರು ತಮ್ಮ ನೇಕಾರಿಕೆ ಚುಟಿವಟಿಕೆ ನಡೆಸಲು ಬೇಕಾಗುವ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿವೆ.

ರಾಜ್ಯದಲ್ಲಿ 11 ಸಹಕಾರಿ ನೂಲಿನ ಗಿರಣಿಗಳು ಕಾರ್ಯನಿರ್ವಹಿಸುತ್ತಿದ್ದು, 2 ಸಹಕಾರಿ ಉಣ್ಣೆ ನೇಕಾರಿಕೆ ಗಿರಣಿಗಳು ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ, ಕರ್ನಾಟಕ ರಾಜ್ಯ ಸಹಕಾರಿ ನೂಲಿನ ಗಿರಣಿಗಳ ಮಹಾಮಂಡಳ ನಿ., ಬೆಂಗಳೂರು ಹಾಗೂ ಕರ್ನಾಟಕ ರಾಜ್ಯ ಉಣ್ಣೆ ಕೈಮಗ್ಗ ನೇಕಾರರ ಖಾದಿಯೇತರ ಸ.ಸಂ.ಗಳ ಮಹಾಮಂಡಳ ನಿ., ಚಳ್ಳಕೆರೆ, ಇವುಗಳೂ ಸಹ ಕಾರ್ಯನಿರ್ವಹಿಸುತ್ತಿವೆ.

ಈ ಮಹಾಮಂಡಳಿಯು ಹೊಸದಾಗಿ ನೂಲಿನ ಗಿರಣಿಗಳನ್ನು ಸ್ಥಾಪಿಸಲು, ಕಾರ್ಯ ನಿರ್ವಹಿಸುತ್ತಿರುವ ನೂಲಿನ ಗಿರಣಿಗಳನ್ನು ನವೀಕರಿಸಲು ಮತ್ತು ರೋಗಗ್ರಸ್ಥ ಗಿರಣಿಗಳನ್ನು ಪುನಶ್ಚೇತನಗೊಳಿಸಲು ಯೋಜನಾ ವರದಿಗಳನ್ನು ತಯಾರಿಸುತ್ತದೆ, ಇವುಗಳಿಗೆ ಬೇಕಾದ ಶೇರು ಹಣ ಮತ್ತು ಅವಧಿ ಸಾಲವನ್ನು ಪಡೆಯುವುದಕ್ಕಾಗಿ ಬೇಕಾದ ಅಂಕಿ ಅಂಶಗಳು ಮತ್ತು ಅಂದಾಜು ಪಟ್ಟಿಗಳನ್ನು ತಯಾರು ಮಾಡಿಕೊಡುತ್ತದೆ.

ರಾಜ್ಯ ಸರ್ಕಾರವೂ ಸಹ ನೇಕಾರರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮಗಳು ಈ ಕೆಳಕಂಡಂತಿವೆ;

1. ನೇಕಾರರು ನೇಕಾರಿಕೆ ಉದ್ದೇಶಕ್ಕಾಗಿ ನೇಕಾರರ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಪಟ್ಟಣ ಸಹಕಾರಿ ಬ್ಯಾಂಕ್ಗಳು ಮತ್ತು ಕೃಷಿಯೇತರ ಪತ್ತಿನ ಸಹಕಾರ ಸಂಘಗಳಿಂದ ಸಾಲ ಪಡೆದು ದಿನಾಂಕ: 30.06.2017 ಕ್ಕೆ ಹೊಂದಿರುವ ಹೊರಬಾಕಿಯಲ್ಲಿ ರೂ.50,000/- ಗಳ ವರೆಗಿನ ಸಾಲ ಮನ್ನಾ ಮಾಡಲು ಆದೇಶ ಹೊರಡಿಸಲಾಗಿದೆ.

2. ನೇಕಾರರ ಸಹಕಾರ ಸಂಘಗಳು/ ಕೃಷಿಯೇತರ ಪತ್ತಿನ ಸಹಕಾರ ಸಂಘಗಳು/ ಪಟ್ಟಣ ಸಹಕಾರ ಬ್ಯಾಂಕ್ಗಳು ಹಾಗೂ ಇತರೆ ಸಹಕಾರ ಬ್ಯಾಂಕುಗಳಿಂದ ರೂ.2.00 ಲಕ್ಷಗಳ ವರೆಗೆ ಶೇಕಡ 1 ರ ಬಡ್ಡಿ ದರದಲ್ಲಿ ಸಾಲ ಹಾಗೂ ರೂ.2.00 ಲಕ್ಷಗಳಿಂದ ರೂ.5.00 ಲಕ್ಷಗಳ ವರೆಗೆ ಶೇಕಡ 3 ರ ಬಡ್ಡಿ ದರದಲ್ಲಿ ನೀಡಿದ ಸಾಲಕ್ಕೆ ರಾಜ್ಯ ಸರ್ಕಾರವು ಬಡ್ಡಿ ಸಹಾಯಧನ ನೀಡಲಾಗುವುದು.

3. ಸಹಕಾರಿ ನೂಲಿನ ಗಿರಣಿಗಳು ಪಡೆದಿದ್ದ ಸರ್ಕಾರಿ ಸಾಲವನ್ನು ಈಕ್ವಿಟಿಯನ್ನಾಗಿ ಪರಿವರ್ತಿಸಿದ್ದು, ಅವುಗಳ ಸಾಲದ ಮೇಲಿನ ಬಡ್ಡಿ ಮತ್ತು ಸುಸ್ತಿ ಬಡ್ಡಿ ಮನ್ನಾ ಮಾಡಿರುತ್ತದೆ.

4. ಸಹಕಾರಿ ನೂಲಿನ ಗಿರಣಿಗಳ ಅಭಿವೃದ್ಧಿಗಾಗಿ ಮಾನ್ಯ ಮುಖ್ಯಮಂತ್ರಿಗಳ 2017-18ನೇ ಸಾಲಿನ ಆಯವ್ಯಯ ಘೋಷಣೆ ಕಂಡಿಕೆ ಸಂಖ್ಯೆ:409(7) ರಂತೆ, ಸರ್ಕಾರಿ ಆದೇಶ ಸಂಖ್ಯೆ:ವಾಕೈ 30 ಜಕೈಯೋ 2017, ಬೆಂಗಳೂರು, ದಿನಾಂಕ: 03.06.2017 ರಲ್ಲಿ ರಾಜ್ಯದಲ್ಲಿರುವ ಸಹಕಾರಿ ನೂಲಿನ ಗಿರಣಿಗಳು ಬಳಸುವ ವಿದ್ಯುಚ್ಛಕ್ತಿಯ ಪ್ರತಿ ಯೂನಿಟ್ಗೆ ರೂ.2/- ರಂತೆ ವಿದ್ಯುತ್ ಸಹಾಯಧನ ಒದಗಿಸತ್ತಿದೆ.

5. ಕಂಡಿಕೆ ಸಂಖ್ಯೆ:409(8)ರಲ್ಲಿ ಸಹಕಾರಿ ನೂಲಿನ ಗಿರಣಿಗಳು ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾದಿಂದ ಖರೀದಿಸುವ ಹತ್ತಿಯ ಮೇಲೆ ಶೇ.5% ರಷ್ಟು ಸಹಾಯಧನ ನೀಡಲು ಸರ್ಕಾರಿ ಆದೇಶ ಸಂಖ್ಯೆ:ವಾಕೈ 31 ಜಕೈಯೋ 2017, ಬೆಂಗಳೂರು, ದಿನಾಂಕ: 24.05.2017 ಕ್ಕೆ ಹೊರಡಿಸಿರುತ್ತದೆ.