ಜವಳಿ ಬಗ್ಗೆ

 

ಕರ್ನಾಟಕದ ಬಗ್ಗೆ

 

ಕೈಮಗ್ಗ ಮತ್ತು ಜವಳಿ ಇಲಾಖೆಯು 1991-92 ನೇ ಸಾಲಿನಿಂದ ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿರುತ್ತದೆ. ಇಲಾಖೆಯ ಮುಖ್ಯ ಉದ್ದೇಶ ಕೈಮಗ್ಗ ಮತ್ತು ವಿದ್ಯುತ್‍ಮಗ್ಗ ಕ್ಷೇತ್ರವನ್ನು ಅಭಿವೃದ್ದಿಪಡಿಸುವ ಗುರಿ ಹೊಂದಲಾಗಿದೆ ಹಾಗೂ ಜವಳಿ ಕ್ಷೇತ್ರದಲ್ಲಿ ಬಂಡವಾಳ ಹೂಡುವ ಸಣ್ಣ, ಅತಿ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳು ಬಂಡವಾಳ ಹೂಡುವುದಕ್ಕೆ ಮತ್ತು ಉದ್ಯೋಗ ಸೃಜನೆಗಾಗಿ ಉತ್ತೇಜಿಸಲಾಗುತ್ತಿದೆ. ಕರ್ನಾಟಕ ರಾಜ್ಯವು ಹೆಚ್ಚು ರೇಷ್ಮೆ ಉತ್ಪಾದಿಸುತ್ತಿದ್ದು ದೇಶದ ಶೇ.65ರಷ್ಟು ಪಾಲು ಕರ್ನಾಟಕದ್ದಾಗಿರುತ್ತದೆ. ಅದೇ ರೀತಿ ರಾಜ್ಯದಲ್ಲಿ ಹೆಚ್ಚು ಹತ್ತಿ ಉತ್ಪಾದನೆ ಮಾಡುತ್ತಿದ್ದು,ಸುಮಾರು 20.00 ಲಕ್ಷ ಬೇಲ್‍ಗಳ ಹತ್ತಿಯನ್ನು ವಾರ್ಷಿಕವಾಗಿ ಉತ್ಪಾದನೆಯಾಗುತ್ತಿದೆ. ಅದೇ ರೀತಿ ಕರ್ನಾಟಕ ರಾಜ್ಯವು ಸಿದ್ದ ಉಡುಪು ಘಟಕಗಳಲ್ಲಿ ಭಾರತದ ಒಟ್ಟು ಉತ್ಪಾದನೆಯಲ್ಲಿ ಶೇ.20ರಷ್ಟು ಸಿದ್ದ ಉಡುಪು ಉತ್ಪಾದನೆಯನ್ನು ಮಾಡುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಸಾಂಪ್ರದಾಯಿಕವಾಗಿ ಇಲ್‍ಕಲ್ ಸೀರೆಗಳನ್ನು 8ನೇ ಶತಮಾನದಿಂದ ಕರ್ನಾಟಕದ ಉತ್ತರ ಭಾಗದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ ಹಾಗೂ ಸೀರೆಗಳ ನೇಯ್ಗೆ ವೈಭವವನ್ನು ನಾವು ಈಗಲೂ ನೋಡಬಹುದಾಗಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ಉತ್ಪಾದನೆಯಾಗುತ್ತಿರುವ ಕೈಮಗ್ಗ ಉತ್ಪನ್ನಗಳಾದ ಮೊಳಕಾಲ್ಮೂರು ಸೀರೆಗಳು, ಮೈಸೂರು ರೇಷ್ಮೆ ಸೀರೆಗಳು, ಇಳಕಲ್ ಸೀರೆಗಳು ಉಡುಪಿ ಕಾಟನ್ ಸೀರೆಗಳು ಮತ್ತು ಗುಳೇದಗುಡ್ಡದ ಕಣ ಇವುಗಳನ್ನು ಭೌಗೋಳಿಕ ಗುರುತಿಸುವಿಕೆಯಲ್ಲಿ ನೋಂದಣಿಯಾಗಿರುತ್ತದೆ. ರಾಜ್ಯದಲ್ಲಿ 40,000 ಕೈಮಗ್ಗಗಳು ಹಾಗೂ 1,20,000 ವಿದ್ಯುತ್‍ಮಗ್ಗಗಳು ಕಾರ್ಯ ನಿರ್ವಹಿಸುತ್ತಿವೆ. ಕರ್ನಾಟಕ ರಾಜ್ಯದ ಕಲ್ಮುರ್ಗಿಯಲ್ಲಿ ಎಂ.ಎಸ್.ಕೆ ಗಿರಣಿಯು 1885ರಲ್ಲಿ ಸ್ಥಾಪನೆಗೊಂಡು ಕರ್ನಾಟಕದ ಆಧುನಿಕ ಜವಳಿ ಕ್ಷೇತ್ರವನ್ನು ಬಿಂಬಿಸುವಲ್ಲಿ ಮಹತ್ವದ ಪಾತ್ರ ವಹಿಸಿರುತ್ತದೆ. ರಾಜ್ಯದಲ್ಲಿ ಈಗ ಪ್ರಪಂಚದ ಅತಿ ದೊಡ್ಡ ನೂಲಿನ ಗಿರಣಿಯು 2,11,584 ರಾಟೆಗಳನ್ನು ಹೊಂದಿರುವ ಘಟಕವು ಹಾಸನ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.
ಕರ್ನಾಟಕ ರಾಜ್ಯದಲ್ಲಿ ಮೆ:ಶಾಹಿ ಎಕ್ಸ್‍ಪೋರ್ಟ್ ಲಿಮಿಟೆಡ್ ಕಂಪೆನಿಯು 52 ಸಿದ್ದ ಉಡುಪು ಘಟಕಗಳನ್ನು ಸ್ಥಾಪಿಸಿ ಸುಮಾರು 1,00,000 ಜನರಿಗೆ ಉದ್ಯೋಗವಕಾಶ ಕಲ್ಪಿಸಿರುತ್ತಾರೆ. ಕರ್ನಾಟಕ ರಾಜ್ಯವು ಜವಳಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಲು ಪ್ರಶಸ್ತ್ಯ ತಾಣವಾಗಿದೆ.